ಪ್ರೀತಿಸು (Love)

ಬಿಸಿ ಅಪ್ಪುಗೆ ಇಂದು ತಣ್ಣಗಾಗಿತ್ತು. ಹಿಂದೊಮ್ಮೆ ಜಗವೇ ನೀನೆಂದವರು ಈಗ ಈಕೆ ಇಲ್ಲದ ಜಗತ್ತಿನ ಕುರಿತಾಗಿ ಸಲೀಸಾಗಿ ಮಾತಾಡುತ್ತಿದ್ದರು. ಬದಲಾಗಿದ್ದೇನು?

ತಪ್ಪು ಎಲ್ಲಿ ನಡೆಯಿತು ?
ಆತ ಪ್ರೀತಿಸು ಎಂದಾಗ, ಅವನನ್ನೇ ನಂಬಿ ತನ್ನತನವನ್ನೆಲ್ಲ ಬದಿಗಿಟ್ಟಿದ್ದು ?
ಪ್ರೀತಿಯ ಹೆಸರಲ್ಲಿ ಅಸ್ತಿತ್ವ ಕಳಕೊಂಡದ್ದು?
ತನ್ನದಲ್ಲದ ಊರಿಗೆ ನಂಬಿ ನಡೆದಿದ್ದು?

ಬಾಗಿಲ ಸಂದಿಯಲ್ಲಿ ನಿಂತು ಇದೆಲ್ಲವನ್ನು ಯೋಚಿಸುತ್ತಿದ್ದ ಅಂಬಿಕಾ ಕಸ ತೆಗೆದುಕೊಂಡು ಹೋಗುವ ಗಾಡಿಯ ಜೋರಾದ ಸೀಟಿ ಸದ್ದಿಗೆ ತನ್ನ ಯೋಚನಾ ಲಹರಿಯಿಂದ ಹೊರಗೆ ಬರುತ್ತಾಳೆ. ಹಿಂದೆಯಿಂದ ೬ ವರ್ಷದ ಮಗ ಅಭಯ “ಅಮ್ಮ , ಇವತ್ತು ಟಿಫನ್ ಗೆ ಏನು ಹಾಕಿದ್ದೀಯ ? ಚಿತ್ರಾನ್ನ ಆದರೆ ಬೇಡವೇ ಬೇಡ “ ಅಂದ.

ಮಗನಿಗೆ ಟಿಫನ್ ಡಬ್ಬಿ ಕಟ್ಟಿ ಕೊಟ್ಟ ಕೂಡಲೇ, ಅವನು ಓಡುತ್ತಾ ಶಾಲೆಗೆ ಹೋಗಲು ಬಾಗಿಲು ದಾಟಿದ.

ಅವಳು ಮೈಮರೆತು ನಿಂತಿದ್ದ ನಡುಮನೆಯಿಂದ, ಅಡುಗೆ ಮನೆಗೆ ಹೋಗಿ, ಬಿಸಿಯ ಹಾಲನ್ನು ಒಂದು ಗ್ಲಾಸಿನಲ್ಲಿ ಹಾಕಿದಳು. ಆದರೆ ಕುಡಿಯಲೇ ಇಲ್ಲ. ಅವಳ ಯೋಚನೆಗಳು ಈಗ ಕೆಲವು ವರ್ಷಗಳ ಹಿಂದೆ ಹೋಗಿತ್ತು.
೭ ವರ್ಷಗಳ ಹಿಂದಿನ ಘಟನೆಗಳು ಮನದಲ್ಲಿ ಮರುಕಳಿಸತೊಡಗಿತು.
ಆ ರಾತ್ರಿ, ಮನೆಬಿಟ್ಟ ದಿನ.

ಮನೆಯವರೆಲ್ಲರನ್ನು ಕಾಡಿ ಬೇಡಿ ಕೊನೆಗೆ ಅಮ್ಮ, ಅಪ್ಪ, ಅಣ್ಣ, ಎಲ್ಲರೂ ವಿರೋಧಿಸಿದ್ದರೂ, ಅಂಬಿಕಾ ಹಠದಿಂದ ಇವನೊಂದಿಗೆ ಹೊರಟು ನಿಂತಿದ್ದಳು. ರಮಣ ತಾನೊಬ್ಬ ಉದ್ಯಮಿ, ರಾಣಿಯ ಹಾಗೆ ಇರುತ್ತಿ ಎಂದೆಲ್ಲಾ ಮೋಡಿ ಮಾತುಗಳನ್ನಾಡಿ ನಂಬಿಸಿವನು.
“ನಾನು ಇವಳ ಜೊತೆ ಬದುಕು ಕಟ್ಟಿಕೊಳ್ಳುತ್ತಿದ್ದೇನೆ,” ಎಂದು ತನ್ನ ಹೆತ್ತವರಿಗೂ ಹೇಳಿದ್ದ. ಅಂಬಿಕಾ, ತನ್ನ ಕುಟುಂಬದ ವಿರೋಧದ ನಡುವೆಯೂ, ಎಲ್ಲವನ್ನೂ ತ್ಯಜಿಸಿ ಬಂದಿದ್ದಳು. ಮೊದಲ ಕೆಲವು ತಿಂಗಳು ಕನಸಿನಂತಿದ್ದವು. ಆದರೆ ಮೂರು ವರ್ಷ ಗಳಲ್ಲಿ ಅವನು ಸಂಪೂರ್ಣವಾಗಿ ಬದಲಾಗ ತೊಡಗಿದ. ಪ್ರೀತಿ ಮಾತುಗಳು ಕಡಿಮೆಯಾಗುತ್ತಾ ಹೋದವು. ಆತನಿಗೆ ತಾನೊಬ್ಬ ದೊಡ್ಡ ವ್ಯಕ್ತಿ ಆಗಬೇಕೆಂಬ ಹಂಬಲ, ಜೊತೆಗೆ ಹಣದ ಕೊರತೆ, ಪ್ರತಿ ವಿಷಯಕ್ಕೂ ಅಂಬಿಕಳಲ್ಲಿ ದೋಷ ಹುಡುಕ ತೊಡಗಿದ. ಮೊದಲು ಮೂರು ದಿನ ಇದ್ದ ಬಿಸ್ನೆಸ್ ಮೀಟಿಂಗುಗಳು ಬರಬರುತ್ತ ವಾರಗಟ್ಟಲೆ ಮುಂದುವರಿದವು.
ಒಮ್ಮೆ ಅಂಬಿಕಾ ಕೇಳಿದ್ದಳು:
“ನಮ್ಮಿಬ್ಬರ ಮಧ್ಯೆ ಏನು ಬದಲಾಯಿತು ರಮಣ?”
ಅವನು ಕಡ್ಡಿ ಮುರಿದಂತೆ ಹೇಳಿದ್ದ : “ಬದಲಾವಣೆಗಳೇ ಜೀವನ. ನೀನು ಮಾತ್ರ ಇನ್ನೂ ಹಾಗೆ ಉಳಿದಿದ್ದಿ, ನನ್ನ ದಾರಿ ನನಗೆ, ನೀನು ನಿನ್ನ ದಾರಿ ನೋಡಿಕೊಂಡು ಹೋಗು.”
ಮುಗ್ಧ ಅಭಯ ಆಗಾಗ ತನ್ನ ಅಪ್ಪನನ್ನು ಕೇಳುತ್ತಿದ್ದ. “ಅಪ್ಪ ಎಲ್ಲಿ ಅಮ್ಮ? ಯಾವಾಗ ಬರ್ತಾರೆ ?” ಆ ಪ್ರಶ್ನೆಗೆ ಅಂಬಿಕಾಳಲ್ಲಿ ಉತ್ತರ ಇರಲಿಲ್ಲ. ಆಕೆ ತಾನು ಒಬ್ಬಂಟಿಯಾಗೇ ಉಳಿದಿದ್ದರೂ, ಮಗನಿಗೆ ತಂದೆಯ ಕೊರತೆ ತಿಳಿಯದಂತೆ ಬೆಳೆಸಿದಳು.

ಅವಳು ಕಳೆದು ಹೋದ ಯೌವನವನ್ನು ,ಆತ್ಮ ಗೌರವವನ್ನು ಒಡೆದ ಸಂಸಾರದಲ್ಲಿ ಹುಡುಕುತ್ತಾಳೆ. ಕಳಕೊಂಡ ತನ್ನತನವನ್ನು ಜೋಡಿಸಲು ನಿಧಾನವಾಗಿ ಯತ್ನಿಸುತ್ತಾಳೆ. ನಿರಾಸೆ ಪಟ್ಟು ಮಗನ ಮುದ್ದು ಮಾತುಗಳಲ್ಲೇ ನೆಮ್ಮದಿ ಕಾಣುತ್ತಾಳೆ.

ಕಿಟಕಿಯಿಂದ ಬರುವ ಬೆಳಕನ್ನು ನೋಡುತ್ತ, ಅಂಬಿಕಾ ತಾನು ಕಟ್ಟಿಕೊಂಡು ಬಂದ ಬದುಕಿನ ಬಗ್ಗೆ ಪುನರಾವಲೋಕನ ಮಾಡುತ್ತಾಳೆ. ಅವಳು ತಪ್ಪು ಮಾಡಿದ್ದಳೋ? ಬಹುಶಃ ಇಲ್ಲ.
ಆಕೆ ನಂಬಿದ್ದಳು ; ಪ್ರೀತಿಯನ್ನು ; ಆ ನಂಬಿಕೆಯ ಬಗ್ಗೆ ಅವನು ಹೊಣೆಗಾರನಾಗಿರಬೇಕಿತ್ತೇನೋ.
ಅವಳು ತನ್ನೊಳಗೇ ಗುಡುಗುತ್ತಾಳೆ:
“ತಪ್ಪು ನಾನು ಪ್ರೀತಿಸಿದ್ದಲ್ಲ ; ಅವನು ಪ್ರೀತಿಸು ಎಂದು ಹೇಳಿದುದಲ್ಲ ; ತಪ್ಪು ಅವನು ಪ್ರೀತಿಯ ಅರ್ಥವನ್ನೇ ಮರೆತದ್ದು.”
ಅಂಬಿಕಾ ಅವನಿಲ್ಲದೇ ಕಟ್ಟಿಕೊಂಡ ಜೀವನದ ಬಗ್ಗೆ ಹೆಮ್ಮೆ ಪಡುತ್ತಾಳೆ. ಸಮಾಜದ ಮುಂದೆ ತಲೆತಗ್ಗಿಸುವ ಬದಲು, ತಾನೊಬ್ಬ ತಾಯಿ ಎಂಬ ಸತ್ಯದ ಮುಂದೆ ನಿಂತು ಹುಚ್ಚಿಯಂತೆ ನಗುತ್ತಾಳೆ.

ತಣಿದ ಹಾಲನ್ನು ಪುನಃ ಕುದಿಸಿ ಚಹಾ ಮಾಡಿಕೊಳ್ಳುತ್ತಾಳೆ. ಕಾಲಚಕ್ರ ಸಾಗಲೇ ಬೇಕು. ಮಗ ಬರುವ ಹೊತ್ತಿಗೆ ಮತ್ತೆ ಅವಳು ಆಗಬೇಕಿದೆ– ಒಡೆದ ಮನೆಯ, ಬಡಿದ ಬಾಗಿಲೊಳಗೆ ನಗುವಿನ ಮುಖವಾಡ ಹೊತ್ತಿರುವ ತಾಯಿ.

-ಲಿಖಿತಾ (Likitha)


This story follows Ambika, a woman reflecting on the emotional cost of a love she once trusted completely. Years earlier, she had defied her family to marry Raman, believing his promises of a secure and loving life. Though the early months felt like a dream, financial strain and his growing ambitions slowly changed him; affection faded, blame replaced intimacy, and eventually he distanced himself from both her and their young son, Abhay. Left to raise her child alone, Ambika struggles with memories of lost youth, dignity, and identity, yet gradually begins reclaiming her sense of self. She realizes that her mistake was not loving, but trusting someone who forgot the meaning of love. Despite the pain, she finds quiet strength and pride in rebuilding her life, choosing resilience over regret as time moves forward.